When the muddy water clears
ಕದಡಿದ ಸಲಿಲಂ ತಿಳಿವಂದದಿ ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( When the muddy water clears - English version is given below in the end ) ತಣ್ಣಗಿನ ಮಾಗಿಯು ನಿಧಾನಕ್ಕೆ ಕಳಚುತ್ತ ವಸಂತ ಆಗಮಿಸುವ ದಿನಗಳಲ್ಲಿ, ಸುತ್ತುಮುತ್ತಣದ ತರುಲತೆಗಳೆಲ್ಲ ಚಿಗುರಿ ಸಂಭ್ರಮಿಸುತ್ತಿದ್ದ ಒಂದು ಅಪರಾಹ್ನ, ತಿಳಿಯಾದ ಸರೋವರದ ಮೇಲಿಂದ ಸುಳಿದಾಡುತ್ತ ಮಂದವಾಗಿ ಬೀಸುವ ತಂಗಾಳಿ ಹಿತವಾಗಿ ನನ್ನನ್ನಾವರಿಸುತ್ತಿರಲು,ನಿದ್ರಾದೇವಿಯು ನನ್ನ ಚಿತ್ತವನ್ನಪಹರಿಸತೊಡಗಿದಳು. ಕಿವಿಯ ಮೇಲೆ ಬೀಳುತ್ತಿದ್ದ, ಉಡುಪ ಮೇಷ್ಟ್ರು ಬೋಧಿಸುತ್ತಿದ್ದ ‘ಪಾಯಿಸೊನ್ ಡಿಸ್ಟ್ರಿಬ್ಯುಶನ್’ ಪಾಠ ಮನಸ್ಸಿನ ಒಳಗೆ ನಾಟಲು ವಿಫಲವಾಗುತ್ತಿತ್ತು. ಆಗ ಎಡಭಾಗದ ಸಾಲಿನಲ್ಲಿ ಕುಳಿತ ನಾಗವೇಣಿಯು ( ನಾವು ಹೃಸ್ವವಾಗಿ ಕರೆಯುವ ನಾಗ್) ಮುಡಿದ ಕೆಂಡಸಂಪಿಗೆಯನ್ನು ಸ್ಪರ್ಶಿಸಿ ಸುಳಿದು ಬಂದ ಮಂದಮಾರುತನು ನನ್ನ ನಾಸಿಕವನ್ನು ಹೊಕ್ಕಾಗ ಮತ್ತು ಆ ಕ್ಷಣದಲ್ಲೇ ಪಕ್ಕದಲ್ಲಿ ಕೂತಿದ್ದ ರಾಧಾ ನನ್ನ ಪಕ್ಕೆಗೆ ತಿವಿದಾಗ ನಿದ್ರಾದೇವಿಯ ಮಡಿಲಿನಿಂದ ದೊಪ್ಪನೆ ಜಾರಿ ಬಿದ್ದಂತೆನಿಸಿ ತಡವರಿಸುತ್ತಾ ಕಣ್ಣು ತೆರೆದೆ. ಪಿಸುಮಾತಿನಲ್ಲಿ ಗೆಳೆಯ ರಾಧಾಕೃಷ್ಣ (ನಾವು ಹೃಸ್ವವಾಗಿ ಕರೆಯುವ ರಾಧಾ) - 'ಮೇಷ್ಟ್ರು ನಿನ್ನ ತೂಕಡಿಕೆಯನ್ನು ಗಮನಿಸಿದರು' ...