Scientist's Purse
ವಿಜ್ಞಾನಿಯ ಪರ್ಸ್ ಲೇಖಕ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ ( Scientist's Purse - English version is given below in the end ) ಮೊದಲ ಸಂಬಳದ ಮಧುರ ಕ್ಷಣಗಳ ನೆನಪು ಯಾರಿಗೆ ಇಷ್ಟವಾಗುವುದಿಲ್ಲ ? ಸದಾ ತಂದೆಯನ್ನು ಕೇಳಿ ಪಡೆದು ಖರ್ಚು ಮಾಡುತ್ತ ಬಂದವನಿಗೆ ಸ್ವತಃ ದುಡಿದು ಸಂಬಳ ಬಂದಾಗ ಸಹಜವಾಗಿಯೇ ಸ್ವಲ್ಪ ಕೋಡು ಮೂಡಿದಂತೆನಿಸಿತ್ತು. ಆದರೆ ಅದಕ್ಕಾಗಿ ನಾನು ನನ್ನ ಹುಟ್ಟೂರಿನಿಂದ ಮೂರು ಸಾವಿರ ಕಿಲೋಮೀಟರು ದೂರ ವಲಸೆ ಬರಬೇಕಾಯಿತು , ಡೆಹ್ರಾಡೂನ್-ನ ಸಂಶೋಧನಾಲಯವೊಂದಕ್ಕೆ. ಭಾರತದ ರಾಷ್ಟ್ರಪತಿಗಳು ಸಂತೋಷದಿಂದ ನನ್ನನ್ನು ' ವಿಜ್ಞಾನಿ ' ಎಂಬ ಹುದ್ದೆಗೆ ನೇಮಿಸಿದ್ದಾರೆ ಎಂಬ ಪತ್ರ ತಲುಪಿದ ಮೇಲೆ - ದೂರ ಮೂರು ಸಾವಿರವಾದರೇನು ? ಆರು ಸಾವಿರವಾದರೇನು ? ಗಂಟುಮೂಟೆ ಕಟ್ಟಿ ಹೊರಡುವುದೇ - ಎಂದು ಹೊರಟು ಬಂದಿದ್ದೆ. ಡೆಹ್ರಾಡೂನ್ ಹಿಮಾಲಯದ ಶ್ರೇಣಿಗಳಿಗೆ ಸಮೀಪದ ಶಿವಾಲಿಕ್ ಬೆಟ್ಟಗಳ ಸಾಲಿನ ನಡುವೆ ಇರುವ ಕಣಿವೆ ಪ್ರದೇಶ. ಅಲ್ಲಿ ತಲೆ ಎತ್ತಿ ನೋಡಿದರೆ ಉತ್ತರಕ್ಕೆ ಹರಡಿರುವ ಬೆಟ್ಟದ ಸಾಲಿನಲ್ಲಿ ಮಸ್ಸೂರಿ ಎಂಬ ಪ್ರವಾಸೀತಾಣ ಗೋಚರಿಸುತ್ತದೆ. ಅಲ್ಲಿ ಹೋಗಿ ನೋಡಿದರೆ ಮತ್ತೂ ಉತ್ತರಕ್ಕೆ ಮನಮೋಹಕ ಹಿಮಾಲಯ ಶ್ರೇಣಿ ದ್ರಗ್ಗೋಚರವಾಗುತ್ತದೆ. ಅಲ್ಲಿಯವರೆ...